ಭಾರವಿ
ಸಂಸ್ಕøತ ಕವಿ. ಕಾಲ ಕ್ರಿ. ಶ. 634ಕ್ಕಿಂತ ಮುಂಚೆ. ಮಹಾಕಾವ್ಯಗಳನ್ನು ರಚಿಸಿ ಹೆಸರಾದ ಕಾಳಿದಾಸ ಅಶ್ವಘೋಷರ ಬಳಿಕ ಗಣನೀಯನಾದವ. ಕ್ರಿ. ಶ. 634ರ ಐಹೊಳೆ ಶಾಸನದಲ್ಲಿ ಕಾಳಿದಾಸನ ಹೆಸರಿನ ಜತೆಯಲ್ಲೇ ಭಾರವಿಯ ಹೆಸರಿನ ಉಲ್ಲೇಖವಿರುವುದರಿಂದಲೂ ಕ್ರಿ. ಶ. 673ರಲ್ಲಿ ಭಾರತದಲ್ಲಿ ಸಂಚರಿಸಿದ ಇತ್‍ಸಿಂಗ್ ಎಂಬ ಚೀನಿಯಾತ್ರಿಕ ಉಲ್ಲೇಖಿಸಿರುವ ಜಯಾದಿತ್ಯನ ಕಾಶಿಕಾವೃತ್ತಿಯಲ್ಲಿ ಪ್ರಕಾಶ ಸ್ಥೇಯಾಖ್ಯಯೋಶ್ಚ ಎಂಬ ಪಾಣಿನಿ ಸೂತ್ರದ ವೃತ್ತಿಯಲ್ಲಿ ಭಾರವಿಯ ಕಿರಾತರ್ಜುನೀಯದ 'ಸಂಶಯ್ಯ ಕರ್ಣಾದಿಷು ಶಿಷ್ಠತೇಯಃ' ಎಂಬ ಪ್ರಯೋಗ ಉದಾಹೃತವಾಗಿರುವುದರಿಂದಲೂ ಭಾರವಿ ಕ್ರಿ.ಶ. ಆರನೆಯ ಶತಮಾನಕ್ಕಿಂತ ಈಚಿನವನಲ್ಲ. ದಂಡಿವಿರಚಿತ ಎನ್ನಲಾದ ಅವಂತಿ ಸುಂದರೀಕಥೆಯ ಉಪಕ್ರಮಶೋಕಗಳಲ್ಲಿ ಭಾರವಿಗೆ ದಾಮೋದರನೆಂಬ ಹೆಸರು ಇತ್ತೆಂದೂ ಅವನ ಮಗನ ಪ್ರಪೌತ್ರನೇ ದಂಡಿಯೆಂದೂ ಅವನು ಕೌಶಿಕ ಗೋತ್ರದ ಬ್ರಾಹ್ಮಣನೆಂದೂ ಅವನ ಪೂರ್ವಜರು ಆರ್ಯಾವರ್ತದ ವಾಯವ್ಯದಲ್ಲದ್ದ ಆನಂದಪುರದಿಂದ ದಕ್ಷಿಣಾಪಥದ ಅಚಲಪುರಕ್ಕೆ ವಲಸೆ ಬಂದಿದ್ದವರೆಂದೂ ಭಾರವಿ ಚಾಲುಕ್ಯರಾಜನಾದ ವಿಷ್ಣುವರ್ಧನನ ಗೆಳೆಯನಾಗಿದ್ದ ಕ್ರಮೇಣ (ಕೊಂಕಣದ) ದುರ್ವಿನೀತನೆಂಬ ರಾಜನ ಆಸ್ಥಾನ ಕವಿಯಾದನೆಂದು ಹೇಳಿದೆ. ಈ ದುರ್ವಿನೀತ ಕಿರಾತಾರ್ಜುನೀಯದ 16ನೆಯ (ಚಿತ್ರಬಂಧಗಳ) ಸರ್ಗಕ್ಕೆ ವಾಖ್ಯಾನ ಬರೆದುದಾಗಿ ಗುಮ್ಮಾರೆಡ್ಡಿಪುರದ ತಾಮ್ರಪತ್ರ ಶಾಸನದಿಂದ ತಿಳಿದುಬರುತ್ತದೆ. ಈ ವ್ಯಾಖ್ಯಾನ ಈಗ ಉಪಲಬ್ಧವಾಗಿಲ್ಲದಿದ್ದರೂ ದಿರ್ವಿನೀತನ ಕಾಲ ಸುಮಾರು 580 ಎಂದು ನಂಬಲಾಗಿದೆಯಾದ್ದರಿಂದ ಭಾರವಿ 6ನೆಯ ಶತಮಾನದ ಉತ್ತರಾರ್ಧದವನೆಂದು ಹೇಳಲವಕಾಶವಿದೆ ಆದರೆ ಅವಂತಿಸುಂದರೀ ಕಥೆ ದಂಡಿ ವಿರಚಿತ ಎಂಬುದನ್ನಾಗಲಿ ಮೇಲಿನ ಶಾಸನ ಪ್ರಾಮಾಣಿಕವೆಂಬುದನ್ನಾಗಲಿ ಪಂಡಿತರನೇಕರು ಒಪ್ಪುತ್ತಿಲ್ಲ.

ಭಾರವಿ ತನ್ನ ಕಿರಾತಾರ್ಜುನೀಯ ಕಾವ್ಯದ 18ನೆಯ ಸರ್ಗದ 5ನೆಯ ಶ್ಲೋಕದಲ್ಲಿ ಶಿವನ ಎದೆಯ ಮೇಲೆ ಅರ್ಜುನನೆಸಗಿದ ಮುಷ್ಟಿಪ್ರಹಾರವನ್ನು ಸಹ್ಯಾದ್ರಿಯ ವಿಶಾಲವಾದ ತಪ್ಪಲು ಪ್ರದೇಶದ ಮೇಲೆ ಅಪ್ಪಳಿಸಿ ಹಿಂದೂಡಲ್ಪಡುವ ಸಮುದ್ರದ ಅಲೆಗಳಿಗೆ ಹೋಲಿಸಿರುವುದರಿಂದಲೂ ಮೊದಲನೆಯ ಸರ್ಗದ ಕೊನೆಯ ಶ್ಲೋಕದಲ್ಲೂ 9ನೆಯ ಸರ್ಗದ 2 ಮತ್ತು 5ನೆಯ ಶ್ಲೋಕಗಳಲ್ಲೂ ಸೂರ್ಯಸಮುದ್ರದಲ್ಲಿ ಮುಳುಗುವುದನ್ನು ನಿರೂಪಿಸಿರುವುದರಿಂದಲೂ ಈತ ಪಶ್ಚಿಮದ (ಅರಬ್ಬೀ) ಸಮುದ್ರತೀರದಲ್ಲಿ ನೆಲಸಿದ್ದವನಾಗಿರಬೇಕೆಂದು ಊಹಿಸಬಹುದು.

ಈ ಕವಿ ಮೊದಲು ತೀರ ಬಡವನಾಗಿದ್ದನೆಂದೂ ಅವನ ಸಹಸಾವಿಧದೀತನ ಕ್ರಿಯಾಂ ಎಂಬ ಕಿರಾತಾರ್ಜುನೀತದ ಶ್ಲೋಕವೊಂದು ಈತನಿಗೆ ರಾಜಾಶ್ರಯ ದೊರಕಿಸಿಕೊಟ್ಟಿತೆಂದೂ ಮುಂತಾಗಿ ಹೇಳುವ ಕೆಲವು ದಂತಕಥೆಗಳನ್ನು ಬಿಟ್ಟರೆ ಈತನ ಜೀವನ ವೃತ್ತಾಂತದ ಬಗೆಗೆ ವಿಶೇಷ ಮಾಹಿತಿ ಉಪಲಬ್ಧವಾಗಿಲ್ಲ. ಈತನಿಗೆ ಮಹಾಶೈವ, ಮಜಹಾಪ್ರಭಾವ ಪ್ರದೀಪ್ತಭಾಸ ಎಂಬ ಹೆಸರುಗಳಿದ್ದುವಾಗಿ ಅವಂತಿಸುಂದರೀ ಕಥೆಯಲ್ಲಿ ಹೇಳಿದೆ.

ಭಾರವಿ ರಚಿತವೆಂದು ಪರಿಚಿತವಾಗಿರುವ 18 ಸರ್ಗಗಳ ಕಿರಾತಾರ್ಜುನೀಯ ಮಹಾಕಾವ್ಯ. ಮಹಾಭಾರತದ ಒಂದು ಪ್ರಸಿದ್ಧ ಆಖ್ಯಾನದ ಮೇಲೆ ರಚಿಸಿರುವುದಾಗಿದೆ. ದ್ಯೂತದಲ್ಲಿ ಸೋತ ಯುಧಿಷ್ಠಿರ ಸಹೋದರರ ಸಮೇತ ದ್ವೈತ ವನದಲ್ಲಿರುವಾಗ ಅಲ್ಲಿಗೆ ಬಂದ ವೇದವ್ಯಾಸರ ಹೇಳಿಕೆಯಂತೆ ಅರ್ಜುನ ಈಶ್ವರನಿಂದ ನಿಂದ ಪಾಶುಪತಾಸ್ತ್ರ ಪಡೆಡಯಲಿಕ್ಕಾಗಿ ಇಂದ್ರಕೀಲಪರ್ವತದಲ್ಲಿ ತಪಸ್ಸುಮಾಡಲು ಹೋಗುತ್ತಾನೆ. ಅರ್ಜುನನ ಕಠಿಣ ತಪಸ್ಸನ್ನು ಭಂಗಪಡಿಸಲು ಅಪ್ಸರಸ್ತ್ರೀಯರೇ ಮೊದಲಾದವರು ಯತ್ನಿಸುತ್ತಾರೆ. ಆದರೆ ಅರ್ಜುನ ಮತ್ತಷ್ಟು ಏಕಾಗ್ರ ಮನಸ್ಸಿನಿಂದ ಈಶ್ವರನ ಉಪಾಸನೆಗೆ ತೊಡಗುತ್ತಾನೆ. ಈತನ ತಪೋಬಲವನ್ನು ಪರೀಕ್ಷಿಸುವುದಕ್ಕಾಗಿ ಈಶ್ವರ ಕಿರಾತ ವೇಷಧರಿಸಿ ಬರುತ್ತಾನೆ. ಒಂದು ಹಂದಿಯನ್ನು ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸುತ್ತಾನೆ ಅರ್ಜುನ ಹಂದಿಯ ಮೇಲೆ ಬಾಣ ಬಿಡುತ್ತಾನೆ. ಅರ್ಜುನನ ಬಾಣದಿಂದ ಹಂದಿ ಸಾಯುತ್ತದೆ. ಆದರೆ ಬಿಟ್ಟ ಬಾಣದ ವಿಷಯದಲ್ಲಿ ಕಿರಾತ ಹಾಗೂ ಅರ್ಜುನರಲ್ಲಿ ಜಗಳ ಆರಂಭವಾಗುತ್ತದೆ. ಒಂದು ಸಲ ಅರ್ಜುನ ವಿಜಯಿಯಾದರೆ ಮತ್ತೊಂದು ಸಲ ಕಿರಾತವಿಜಯಿ ಎನಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಇಬ್ಬರೂ ಮಲ್ಲಯುದ್ಧಕ್ಕೆ ನಿಲ್ಲುತ್ತಾರೆ. ಗಾಡೀವಿಯ ಬಲಕ್ಕೆ ಪ್ರಸನ್ನನಾದ ಶಂಕರ ತನ್ನ ನಿಜಸ್ವರೂಪ ತೋರಿಸಿ ಪಾಶುಪತಾಸ್ತ್ರ ಕೊಟ್ಟು ಅರ್ಜುನನ ಅಭಿಲಾಷೆಯನ್ನು ಪೂರ್ಣಗೊಳಿಸುತ್ತಾನೆ.
ಅರ್ಜುನ ಪಾಶುಪತಾಸ್ತ್ರ ಪಡೆಯಲು ಹೊರಡುವ ಸನ್ನಿವೇಶ, ಅವನ ತಪಸ್ಸು ಅದರ ಸಿದ್ಧಿ ಈ ಹಿನ್ನೆಲೆಯಲ್ಲಿ ಅರ್ಜುನನಿಗೂ ಕಿರಾತರೂಪಿ ಶಿವನಿಗೂ ನಡೆದ ಯುದ್ಧ - ಇದು ಕಿರಾತಾರ್ಜುನೀಯದ ಕಥಾವಸ್ತು. ಮಹಾಭಾರತದ ವನಪರ್ವದಲ್ಲಿ ಬರುವ ಕಥೆಗೂ ಈ ಕಾವ್ಯದ ಕಥೆಗೂ ವಿಶೇಷ ವ್ಯತ್ಯಾಸವಿಲ್ಲ. ಲಕ್ಷಣಬದ್ಧವಾಗಿರುವ ಈ ಕಾವ್ಯವನ್ನು ಪರಿಶೀಲಿಸಿದವರಿಗೆ ಲಾಕ್ಷಣಿಕರು ಇದನ್ನೇ ಆದರ್ಶವಾಗಿಟ್ಟುಕೊಂಡು ಮಹಾಕಾವ್ಯಲಕ್ಷಣಗಳನ್ನು ರಚಿಸಿರಬೇಕೆಂದು ತೋರದೆ ಇರದು. ಈ ಕಾವ್ಯದ 18 ಸರ್ಗಗಳಲ್ಲಿ ಅಡಕವಾಗಿರುವ 18 ವರ್ಣನೆಗಳೂ ಮನೋಹರವಾಗಿವೆ. ಪಾತ್ರ ಚಿತ್ರಣದಲ್ಲೂ ವಿಷಯನಿರೂಪಣೆಯಲ್ಲೂ ಭಾರವಿಯ ಕೌಶಲ ಅಪ್ರತಿಮ; ಪ್ರತಿಭೆ ಉಜ್ವಲ. ಉಪಮಾನಗಳಿಗೆ ಕಾಳಿದಾಸ ಪ್ರಸಿದ್ಧನಾಗಿರುವಂತೆ ಅರ್ಥಗೌರವಕ್ಕೆ ಭಾರವಿ ಹೆಸರಾಗಿದ್ದಾನೆ. ಕಾಳಿದಾಸನ ಶೈಲಿ ಲಲಿತವೂ ಸುಕುಮಾರವೂ ಆಗಿದ್ದರೆ ಭಾರವಿಯದು ಗಂಭೀರ ಮತ್ತು ಪ್ರೌಢ. ಪ್ರಕೃತಿಮಧುರಾ ಭಾರವಿಗಿರಃ ಎಂಬುದು ಸದುಕ್ತಿಕರ್ಣಾಮೃತದ ಒಂದು ಶ್ಲೋಕದಲ್ಲಿ ಬರುವ ಭಾರವಿ ಪ್ರಶಸ್ತಿ.

ಬೇರೆ ಕಾವ್ಯಾದಿಗಳನ್ನು ಭಾರವಿ ರಚಿಸಲೇ ಇಲ್ಲವೇ ಅಥವಾ ರಚಿಸಿದ್ದು ಈಗ ಅವು ಲುಪ್ತವಾಗಿಬಿಟ್ಟಿವೆಯೇ ಎಂಬುದನ್ನು ತಿಳಿಯಲು ಆಧಾರಗಳಾವುವೂ ದೊರತಿಲ್ಲ. ಕಾಳಿದಾಸನ ಕಾವ್ಯಗಳಿಗೆ ಸಂಜೀವಿನಿ ವ್ಯಾಖ್ಯಾನ ಬರೆದಿರುವ ಮಲ್ಲಿನಾಥನೇ ಕಿರಾತಾರ್ಜುನೀತಕ್ಕೆ ಘಂಟಾಪಥವ್ಯಾಖ್ಯಾನ ಬರೆದಿದ್ದಾನೆ. ಭಾರವಿಯಯ ಈ ಕಾವ್ಯ ನಾರಿಕೇಳಪಾಕದಂತೆ ಎಂಬುದೇ ಮಲ್ಲಿನಾಥನ ಅಭಿಪ್ರಾಯ.
ಕಾಳಿದಾಸ ಅಶ್ವಘೋಷದಲ್ಲಿ ಕಾಣಸಿಗುವ ಚಿತ್ರಬಂಧಾದಿ ಶಬ್ಧ ಚಮತ್ಕಾರಗಳು ಭಾರವಿಯ ಕಾವ್ಯದಲ್ಲಿವೆ. ಕಿರಾತಾರ್ಜುನೀಯದ 15ನೆಯ ಸರ್ಗದ 22ನೆಯ ಶ್ಲೋಕವನ್ನು ಕೊನೆಯಿಂದ ಹಿಂದಕ್ಕೆ ಓದಿದರೆ ಅದೇ 23ನೆಯ ಶ್ಲೋಕ. ಸಂದರ್ಭಾನುಸಾರ ಅರ್ಥವೂ ಸರಿಹೋಗುತ್ತದೆ. ಒಂದು ಅಥವಾ ಎರಡೇ ಅಕ್ಷರಗಳನ್ನು ಬಳಸಿಕೊಂದು ರಚಿತವಾದ ಶ್ಲೋಕಗಳು 16 ಬೇರೆ ಬೇರೆ ವೃತ್ತಗಳಲ್ಲಿವೆ. ಇವೆಲ್ಲವನ್ನೂ ಗಮನಿಸಿದರೆ ಭಾರವಿ ಕಾವ್ಯರಚನೆ ಮಾಡುವ ವೇಳೆಗೆ ಪಾಂಡಿತ್ಯಪ್ರದರ್ಶನ ಕವಿಗೆ ಅವಶ್ಯಗುಣವೆಂಬ ಭಾವನೆ ಬೇರು ಬಿಟ್ಟಿತ್ತೆಂದು ಕಾಣುತ್ತದೆ.

ಕಿರಾತಾರ್ಜುನೀಯದ ಆದಿಯಲ್ಲೆ ಶ್ರೀ ಶಬ್ದವೂ ಅದರ ಪ್ರತಿಯೊಂದು ಸರ್ಗದ ಕೊನೆಯ ಶ್ಲೋಕದಲ್ಲಿ ಲಕ್ಷ್ಮಿಶಬ್ದವೂ ಇರುವುದರಿಂದ ಅದು ಲಕ್ಷ್ಮೀಪದಲಾಂಛನವುಳ್ಳ ಕಾವ್ಯವೆಂದು ಹೆಸರುಗೊಂಡಿತು. ಭಾರವಿಯ ಅನಂತರದವನಾದ ಮಾಘಕವಿ ರಚಿಸಿರುವ ಶಿಶುಪಾಲವಧ ಮಹಾಕಾವ್ಯಅನೇಕ ರೀತಿಯಲ್ಲಿ ಕಿರಾತಾರ್ಜುನೀಯದ ಅನುಕಾರಣವೆಂದೇ ಹೇಳಬಹುದು.

ಕನ್ನಡ ಕವಿ ಭಾರವಿಯ ಕೆಲವು ಶ್ಲೋಕಗಳನ್ನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಅನುವಾದಿಸಿರುವುದನ್ನೂ ಕವಿರಾಜಮಾರ್ಗಕಾರ ಗ್ರಂಥಾರಂಭಕ್ಕೆ ಮುನ್ನ ಭಾರವಿಯನ್ನು ಸ್ಮರಿಸಿರುವುದನ್ನೂ ಇಲ್ಲಿ ಉಲ್ಲೇಕಿಸಬಹುದು.	
(ಎಸ್.ಆರ್.ಎಎನ್.;ಕೆ.ಕೆ.;ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ